ಟ್ಯಾಪೆಸ್ಟ್ರಿ
ನಿಕಟವಾಗಿ ನೇಯ್ದ, ಚಿತ್ರವತ್ತಾದ ವಸ್ತ್ರ, ಇದರಲ್ಲಿ ಬಣ್ಣದ ದಾರವನ್ನು ಹಾಸು ಅಥವಾ ಹೊಕ್ಕು ಇಲ್ಲವೆ ಎರಡು ಕಡೆಯಲ್ಲಿಯೂ ಬಳಸುವುದರಿಂದ ನಮೂನೆ ಸಿದ್ಧವಾಗುತ್ತದೆ. ಇದರ ರಚನೆಯಲ್ಲಿ ಏಕವಿನ್ಯಾಸದಿಂದ ಸಂಯುಕ್ತವಿನ್ಯಾಸಗಳ ವರೆಗೆ ಪ್ರತಿಯೊಂದು ವರ್ಗದ ನೇಯ್ಗೆ ವಿನ್ಯಾಸಗಳನ್ನು ಅಳವಡಿಸಬಹುದು. ಸರಳ ಆದರೆ ತಾಗುವಂಥ ಪರಿಣಾಮಗಳಿಂದ ಹಿಡಿದು ಎದ್ದುಕಾಣುವ ಜಟಿಲವಾದ ವಿನ್ಯಾಸಶೈಲಿಗಳವರೆಗೆ ಇಲ್ಲಿ ಉಪಯೋಗಿಸುವ ನಕ್ಷೆಗಳು ಹಬ್ಬಿವೆ. ಕೆಲವು ರಚನೆಗಳು ಏಕವರ್ಣೀಯವಾಗಿರಬಹುದು ಇನ್ನು ಕೆಲವಲ್ಲಿ ವರ್ಣವೈವಿಧ್ಯವನ್ನು ಒಳಗೊಂಡ ವಿಶಾಲವಾದ ಅಲಂಕಾರ ವಿನ್ಯಾಸಗಳನ್ನು ಕಾಣಬಹುದು. ಇತರ ಕೆಲವು ರಚನೆಗಳಲ್ಲಿ ವರ್ಣವೇ ಪ್ರಭಾವ ಪೂರ್ಣವಾಗಿದ್ದು, ಭಿನ್ನ ಛಾಯೆ ಮತ್ತು ರೀತಿಗಳನ್ನು ಪ್ರದರ್ಶಿಸುವಂಥ ಪೂರಕ ಪಾತ್ರೆಗಳನ್ನು ಮಾತ್ರ ಚಿತ್ರ ವಹಿಸುತ್ತದೆ.

ನೇಯ್ಗೆ ಮೂಲಕ ಎರಡು ಬಗೆಯ ಟ್ಯಾಪೆಸ್ಟ್ರಿಗಳನ್ನು ತಯಾರಿಸಬಹುದು :
1 ಗೋಡೆ ಟ್ಯಾಪೆಸ್ಟ್ರಿ, 2 ಪೀಠೋಪಕರಣ ಟ್ಯಾಪೆಸ್ಟ್ರಿ.

1 ಗೋಡೆ ಟ್ಯಾಪೆಸ್ಟ್ರಿ : ಇದನ್ನು ಉಣ್ಣೆ ಮತ್ತು ರೇಷ್ಮೆ ನೂಲುಗಳಿಂದ ತಯಾರಿಸುತ್ತಿದ್ದರು. ಮನೆಯನ್ನು ಸಜ್ಜುಗೊಳಿಸುವಲ್ಲಿ ಇದರ ಬಳಕೆ ಇತ್ತು. ಇದರೊಳಗೆ ಬಣ್ಣದ ಎಳೆಗಳನ್ನು ಬಳಸಿ ಕೈಯಿಂದಲೇ ಬೇಕಾದ ನಕ್ಷೆಗಳನ್ನು ಬಿಡಿಸುತ್ತಿದ್ದರು. ಇವು ಅಲಂಕೃತ ಚಿತ್ರಗಳಿಂದಲೂ ಕೂಡಿರುತ್ತಿದ್ದವು. ಗ್ರಾಮೀಣ ಅಥವಾ ಐತಿಹಾಸಿಕ ದೃಶ್ಯಗಳನ್ನು ಒಳಗೊಂಡಂತೆ ಚಿತ್ರಗಳುಳ್ಳ ವಿನ್ಯಾಸಗಳನ್ನು ಇಲ್ಲಿ ನೇಯಲಾಗುತ್ತಿತ್ತು. ಇಂಥವನ್ನು ಮನೆಗಳಲ್ಲಿ ತೂಗು ಹಾಕುವುದಕ್ಕೂ ಇಲ್ಲವೆ ಗೋಡೆಯ ಅಲಂಕರಣಕ್ಕೂ ಉಪಯೋಗಿಸುತ್ತಿದ್ದರು. 

2 ಪೀಠೋಪಕರಣ ಟ್ಯಾಪೆಸ್ಟ್ರಿ : ಇದು ಆಧುನಿಕವಾದದ್ದು. ಇದನ್ನು ಪೀಠೋಪಕರಣಗಳ ಹೊದಿಕೆಗಾಗಿ (ಗವಸು) ಬಳಸುತ್ತಾರೆ. ನಿಕಟವಾಗಿ ನೇಯ್ದ, ಆಲಂಕಾರಿಕವಾಗಿರುವ ಸಣ್ಣಪುಟ್ಟ ವಿನ್ಯಾಸಗಳನ್ನು ಪ್ರದರ್ಶಿಸುವ, ಬಾಳಿಕೆ ಬರುವ ವಸ್ತ್ರ ಜಾಕಾರ್ಡ್ ಮಗ್ಗದಲ್ಲಿ ಇದನ್ನು ತಯಾರಿಸುತ್ತಾರೆ. ಬೇಕಾದ ನಮೂನೆಯನ್ನು ಪಡೆಯಲು ಬಣ್ಣದ ದಾರಗಳ ಬಳಕೆ ಇದೆ. ಭಿನ್ನವರ್ಣಗಳಲ್ಲಿರುವ ಹಾಸು ಮತ್ತು ಹೊಕ್ಕುಗಳನ್ನು ಎರಡು ಅಥವಾ ಹೆಚ್ಚು ಸರಣಿಗಳಲ್ಲಿ ಅಳವಡಿಸಿ ವಿವಿಧ ವಿನ್ಯಾಸಗಳಲ್ಲಿ ಇದನ್ನು ತಯಾರಿಸುವುದೂ ಉಂಟು. ಇನ್ನು ಕೆಲವು ಸಂದರ್ಭಗಳಲ್ಲಿ ವಸ್ತ್ರದ ಮೇಲ್ಮೈ ಏಕರೂಪದ ರಚನೆಯನ್ನು ಹೊಂದಿದ್ದು, ನಕ್ಷೆ ಮಾತ್ರ ವಿವಿಧ ಬಣ್ಣಗಳಲ್ಲಿ ರೂಪಿತವಾಗಿರುತ್ತದೆ. ಕೆಲವು ದಾರಗಳನ್ನು ಮೇಲೆ ಹಾಯಿಸಿ ಜರತಾರಿ (ಬ್ರೋಕೇಡ್) ಮಾದರಿ ಚಿತ್ರಗಳನ್ನು ಉಂಟುಮಾಡುವುದು ಇನ್ನೊಂದು ಬಗೆ.

ಕೆಲವು ಪ್ರಮುಖ ಟ್ಯಾಪೆಸ್ಟ್ರಿಗಳನ್ನು ಮಾತ್ರ ಇಲ್ಲಿ ವಿವರಿಸಿದೆ.
i. ಚಿತ್ರವತ್ತಾದ ಜೋಡಿ ಮತ್ತು ಮುಮ್ಮಡಿ ಸಾದಾನೇಯ್ಗೆ ವಸ್ತ್ರಗಳು : ಈ ಬಗೆಯ ಶೈಲಿಯಲ್ಲಿ ಹಾಸು ಮತ್ತು ಹೊಕ್ಕುದಾರಗಳು ಎರಡು ಸರಣಿಯಲ್ಲಿ 1:1 ಪ್ರಮಾಣದಲ್ಲಿ ಅಳವಟ್ಟಿರುತ್ತವೆ. ಜೋಡಿ ಸಾದಾನೇಯ್ಗೆಗಳ ಸಂಯೋಗದಿಂದ ಈ ವಸ್ತ್ರ ಸಿದ್ಧವಾಗುತ್ತದೆ. ಎರಡು ಪ್ರತ್ಯೇಕ ಬಟ್ಟೆಗಳು ಈ ವಸ್ತ್ರದ ಪ್ರತಿಯೊಂದು ಭಾಗದಲ್ಲಿಯೂ ರೂಪಿತವಾಗಿ, ಅವುಗಳ ದಾರಗಳು ವಸ್ತ್ರದ ಮುಂಭಾಗ ಮತ್ತು ಹಿಂಭಾಗಗಳಲ್ಲಿ ಸ್ಥಾನಪಲ್ಲಟ ಹೊಂದುವುದರಿಂದ ಆ ಬಟ್ಟೆಗಳು ಒಂದುಗೂಡುತ್ತವೆ. ನಕ್ಷೆಯಲ್ಲಿ ಸರಳ ನೇಯ್ಗೆಯನ್ನು ಬಳಸಬಹುದು. ಹೊಕ್ಕಿನ ಎರಡು ಸರಣಿಗಳು ಹಾಸಿನ ಎರಡು ಸರಣಿಗಳ ಬಣ್ಣಗಳನ್ನೇ ಪಡೆದಿದ್ದಾಗ, ಆ ವಸ್ತ್ರದಲ್ಲಿ ಅತಿ ಗಾಢವಾದ ಅತಿ ಲಘುವಾದ ಇಲ್ಲವೆ ಸಂಮಿಶ್ರ ವರ್ಣದ ಪರಿಣಾಮವನ್ನು ತರಬಹುದು (ಚಿತ್ರ 1). ಹಾಸು ಮತ್ತು ಹೊಕ್ಕುಗಳಲ್ಲಿನ ವರ್ಣಗಳನ್ನು ಬೇರೆ ಬೇರೆ ವಿಧದಲ್ಲೂ ಸಂಮಿಶ್ರಮಾಡಬಹುದು. ಅಲ್ಲದೆ ಹಾಸಿನ ಬಣ್ಣಗಳಿಗಿಂತ ಭಿನ್ನವಾದ ಹೊಕ್ಕಿನ ಒಂದು ಅಥವಾ ಎರಡು ಬಣ್ಣಗಳನ್ನು ಬಳಸಿಕೊಂಡು, ಇನ್ನೂ ಅಧಿಕ ವೈವಿಧ್ಯದ ಸಂಮಿಶ್ರ ಬಣ್ಣಗಳನ್ನು ಉಂಟುಮಾಡಬಹುದು. ಏನೇ ಆದರೂ ನಾಲ್ಕಕ್ಕಿಂತ ಹೆಚ್ಚು ಜೋಡಿ ಸಾದಾ ನೇಯ್ಗೆಗಳನ್ನು ನಕ್ಷೆಯಲ್ಲಿ ಕೂಡಿಸುವುದು ಅಪೇಕ್ಷಾರ್ಹವಲ್ಲ.

	ಜೋಡಿ ಸಾದಾನೇಯ್ಗೆ ಶೈಲಿಯ ವಸ್ತ್ರಗಳ ಲಕ್ಷಣಗಳನ್ನೂ ಇನ್ನೂ ಹೆಚ್ಚಿನ ವಿನ್ಯಾಸವುಳ್ಳ ಟ್ಯಾಪೆಸ್ಟ್ರಿ ವಸ್ತ್ರಗಳನ್ನು ಮೂರು ಸರಣಿ ಹಾಸು ಮತ್ತು ಎರಡು ಸರಣಿ ಹೊಕ್ಕನ್ನು ಇಲ್ಲವೆ 3-3 ಸರಣಿ ಹಾಸುಹೊಕ್ಕನ್ನು ಬಳಸಿ ಉತ್ಪಾದಿಸಬಹುದು (ಚಿತ್ರ 2). ಇದರಲ್ಲಿ ಹಾಸು ಮತ್ತು ಹೊಕ್ಕುಗಳ ಬಳಕೆಯ ಕ್ರಮ ಹೀಗಿದೆ : ಹಾಸು-ಕೆಂಪು ಹತ್ತಿ 1 ಎಳೆ, ಹಸಿರು ಹತ್ತಿ 1 ಎಳೆ, ಬಿಳಿಹತ್ತಿ 1 ಎಳೆ ; ಹೊಕ್ಕು-ಹಳದಿ ರೇಷ್ಮೆ 1 ಎಳೆ, ನೀಲಿರೇಷ್ಮೆ 1 ಎಳೆ, ಬಿಳಿಹತ್ತಿ 1 ಎಳೆ. ಹಳದಿ ಮತ್ತು ನೀಲಿ ರೇಷ್ಮೆಹೊಕ್ಕುಗಳು ಮೇಲ್ಭಾಗದಲ್ಲಿ ಪ್ರಮುಖವಾಗಿ ಮೂಡುವಂತೆ ನೇಯ್ಗೆಗಳನ್ನು ಅಳವಡಿಸುವುದರಿಂದ ಏಳು ಪರಿಣಾಮಗಳನ್ನು ನಕ್ಷೆಯಲ್ಲಿ ತರುವುದು ಸಾಧ್ಯ. ಹೀಗೆ ಮಾಡುವುದರಿಂದ ಬೆಲೆಬಾಳುವ ರೇಷ್ಮೆ ದಾರಗಳ ಪೂರ್ಣ ಉಪಯೋಗ ಪಡೆದಂತಾಗುತ್ತದೆ.

	ಮತ್ತೊಂದು ಬಗೆಯ ಪೀಠೋಪಕರಣ ಟ್ಯಾಪೆಸ್ಟ್ರಿಗಳಲ್ಲಿ ಹಾಸು-ಹೊಕ್ಕುಗಳ 3-3 ಸರಣಿಗಳಿರುತ್ತವೆ ಎಲ್ಲಕ್ಕೂ ಹತ್ತಿಯ ನೂಲನ್ನೇ ಬಳಸಲಾಗುತ್ತದೆ. ಮೇಲ್ಮೈ ಹಾಸು ಎಂದು ಪರಿಚಿತವಾದ ಮೊದಲ ಸರಣಿಯೇ ಹಾಸು. ಮೊದಲನೆ ಸರಣಿಯಾದ ಮೇಲಿನ ಹೊಕ್ಕಿನೊಂದಿಗೆ ಹೆಣೆದು ವಸ್ತ್ರದಲ್ಲಿ ಮುಂಭಾಗದ ನಕ್ಷೆಯನ್ನು ರೂಪಿಸಲಾಗುತ್ತದೆ. ಮೂರು ಅಥವಾ ನಾಲ್ಕು ವಿಭಿನ್ನ ವರ್ಣಗಳನ್ನು ಹೊಂದಿರುವ ಎರಡನೆಯ ಸರಣಿ ಹಾಸಿಗೆ ನೆಟ್ಟ ಹಾಸು ಎಂದು ಹೆಸರು ; ಇದು ಎರಡನೆಯ ಸರಣಿ ಹೊಕ್ಕಿನೊಂದಿಗೆ ಹೆಣೆದುಕೊಂಡು ವಸ್ತ್ರದ ಹಿಂಭಾಗದಲ್ಲಿ ಬಣ್ಣದ ಪಟ್ಟೆಗಳನ್ನು ಮೂಡಿಸುತ್ತದೆ. ಈ ಪಟ್ಟೆಗಳು ಎದ್ದುಕಾಣುತ್ತವೆ. ಅನೇಕ ವೇಳೆ ಮೇಲ್ಮೈ ಹಾಸಿನ ಬಣ್ಣಗಳಿಗೆ ಭಿನ್ನವಾದ ಬಣ್ಣಗಳಲ್ಲಿರುವ ನೆಟ್ಟ ಹಾಸು ಅವಶ್ಯವಾದೆಡೆ ಮುಂಭಾಗದಲ್ಲಿಯೂ ಕಾಣಿಸಿಕೊಂಡು ವಸ್ತ್ರದ ಮುಂಭಾಗದ ನಕ್ಷೆಯ ಒಂದು ಭಾಗವಾಗುತ್ತದೆ. ಕಪ್ಪು ಅಥವಾ ಬೂದಿ ಬಣ್ಣದಲ್ಲಿರುವ ಮೂರನೆಯ ಸರಣಿ ಹಾಸನ್ನು ಬಂಧಕ ಹಾಸು ಎನ್ನುತ್ತಾರೆ. ಇದು ಮೂರನೆಯ ಸರಣಿ ಹೊಕ್ಕಿನೊಂದಿಗೆ ಹೆಣೆದು ವಸ್ತ್ರದ ಆಧಾರವನ್ನು (ನೆಲ) ಉಂಟುಮಾಡುತ್ತದೆ. ಹಾಸು ಮತ್ತು ಹೊಕ್ಕಿನ ಸರಣಿಗಳಿಗೆ ಅನೇಕ ವೇಳೆ ಇಮ್ಮಡಿ ನೂಲನ್ನು ಬಳಸಲಾಗುತ್ತದೆ. ಮೊದಲ ಎರಡು ಸರಣಿ ಹೊಕ್ಕುಗಳು ಒಂದೇ ಬಣ್ಣದವು. ಇದೇ ರೀತಿ ಮೇಲ್ಮೈ ಹಾಸು ಮತ್ತು ಮೇಲಿನ ಹೊಕ್ಕು ಸಾಮಾನ್ಯವಾಗಿ ಒಂದೇ ಬಣ್ಣದವಾಗಿರುತ್ತವೆ. ಈ ಬಗೆಯ ಟ್ಯಾಪೆಸ್ಟ್ರಿಯಲ್ಲಿ ಅನೇಕ ವೇಳೆ ರ್ಯಾಟಿನ್ ಎಂದು ಕರೆಯಲಾಗುವ ವಿಶೇಷ ತರಹದ ಹೊಕ್ಕನ್ನು ಬಳಸುವುದೂ ಉಂಟು, ಇದನ್ನು ಮೇಲ್ಮೈಯಲ್ಲಿ ಹಾಯಿಸುವುದರಿಂದ ವಸ್ತ್ರಕ್ಕೆ ಒರಟಾದ ರಚನೆ ಕೊಡಬಹುದು. ಈ ಬಗೆಯ ನೂಲನ್ನು ಬಳಸಿ ಸಿದ್ಧಪಡಿಸಿದ ವಸ್ತ್ರವನ್ನು ರ್ಯಾಟಿನ್ ಟ್ಯಾಪೆಸ್ಟ್ರಿ ಎಂದು ಕರೆಯುವುದಿದೆ.

	ಹತ್ತಿ ಟ್ಯಾಪೆಸ್ಟ್ರಿಯಂತೆಯೇ ರೇಯಾನ್ ಟ್ಯಾಪೆಸ್ಟ್ರಿಯನ್ನೂ ತಯಾರಿಸಲಾಗುತ್ತದೆ. ಇಲ್ಲಿ ಹತ್ತಿನೂಲಿನ ಬದಲು ರೇಯಾನ್ ನೂಲನ್ನು ಮೇಲ್ಮೈ ಹಾಸಿಗೆ ಬಳಸಲಾಗುತ್ತದೆ ವಿವಿಧ ವರ್ಣದ ಬೀಜ ನೂಲನ್ನು (ಸೀಡ್ ಯಾರನ್) ಒಂದು ಸರಣಿ ಹೊಕ್ಕಾಗಿ ಅನೇಕ ವೇಳೆ ಬಳಸುತ್ತಾರೆ. ಅಲ್ಲದೆ ವಸ್ತ್ರದ ಮುಂಭಾಗದಲ್ಲಿ ನೆಟ್ಟ ಹಾಸನ್ನು ಚುಕ್ಕಿಗಳಂತೆ ಹಾಯಿಸುವುದರಿಂದ ಅವು ಬೀಜ ನೂಲಿನ (ಸೀಡ್ ಯಾರನ್) ಗಂಟುಗಳಂತೆ ಕಾಣಿಸಿಕೊಂಡು ಬೀಜ ಪರಿಣಾಮ ಮೂಡಿಬರುತ್ತದೆ. ಜಾಕಾರ್ಡ್ ವಿನ್ಯಾಸದ ಪಿಠೋಪಕರಣ ಟ್ಯಾಪೆಸ್ಟ್ರಿ ವಸ್ತ್ರದಲ್ಲಿ ಇಂಥ ಪರಿಣಾಮವನ್ನು ಕಾಣಬಹುದು (ಚಿತ್ರ 3).

	ಬಹುಪಾಲು ಟ್ಯಾಪೆಸ್ಟ್ರಿ ವಸ್ತ್ರಗಳು ಪೂರ್ಣವಾಗಿ ಹತ್ತಿಯಿಂದ ಇಲ್ಲವೆ ಹತ್ತಿ ಮತ್ತು ಉಣ್ಣೆಯ ಮಿಶ್ರಣದಿಂದ ತಯಾರಾಗುತ್ತವೆ. ಆದರೆ ಗಣನೀಯ ಪ್ರಮಾಣದಲ್ಲಿ ರೇಯಾನ್ ತಂತುಗಳುಳ್ಳ ವಸ್ತ್ರಗಳು ಸ್ಪಲ್ಪ ವಿರಳವೇ ಹೆಚ್ಚು ವಿಶಾಲವಾಗಿ ವಿನ್ಯಾಸಗೊಂಡ ಟ್ಯಾಪೆಸ್ಟ್ರಿ ಶೈಲಿಗಳು ಐದು ಅಥವಾ ಆರು ಸರಣಿ ಹಾಸು, ಮೂರು ಅಥವಾ ನಾಲ್ಕು ಸರಣಿ ಹೊಕ್ಕನ್ನು ಹೊಂದಿರುತ್ತವೆ. ಅನೇಕ ವೇಳೆ ಹಾಸಿನ ಸರಣಿ ನಡೆಸಲ್ಪಟ್ಟಿರುತ್ತವೆ ರೇಯಾನ್-ಹತ್ತಿ ಟ್ಯಾಪೆಸ್ಟ್ರಿ ವಿನ್ಯಾಸವನ್ನು 3-3 ಹಾಸು-ಹೊಕ್ಕಿನ ಸರಣಿಗಳನ್ನು ಬಳಸಿ, ಗಣನೀಯವಾದ ವರ್ಣವೈವಿಧ್ಯ ಹಾಗೂ ಕುಶಲತೆಯಿಂದ ಕೂಡಿದ ವಸ್ತ್ರಗಳನ್ನು ರಚಿಸಿರುವುದು ಉಂಟು ಚಿತ್ರ (4). ಇದರಲ್ಲಿ ಹೊಳಪಿನ ರೇಯಾನನ್ನು ಹಾಸಾಗಿ ಅಳವಡಿಸಿದೆ ಅದರ ಕ್ರಮ ಹೀಗಿದೆ : ಮೊದಲನೆಯ ಸರಣಿ ಉದ್ದಕ್ಕೂ ಹಸಿರಾಗಿರುತ್ತದೆ. ಎರಡನೆಯ ಸರಣಿ ನೀಲಿ, ಹೊಳಪು ಹಳದಿ (ಚಿನ್ನ) ಮತ್ತು ಕೆಂಗಂದು ಬಣ್ಣಗಳಲ್ಲಿದ್ದು ನಮೂನೆಗೆ ತಕ್ಕಂತೆ ನೆಡಲ್ಪಟ್ಟಿರುತ್ತದೆ. ಮೂರನೆಯ ಸರಣಿಯ ಉದ್ದಕ್ಕೂ ಕೆನೆ ಬಣ್ಣ ಇರುತ್ತದೆ. ದಟ್ಟವಾದ (ಕಂಡೆನ್ಸರ್) ಹತ್ತಿ ಹಾಗೂ ಹೊಳಪು ವಿಸ್ಕೊಸ್ ರೇಯಾನ್ ಹೊಂದಿರುವ ಹೊಕ್ಕನ್ನು ಅಳವಡಿಸಿರುವ ರೀತಿ ಹೀಗೆದೆ : ಮೊದಲನೆಯ ಸರಣಿ ಕಪ್ಪು (ನಿಗ್ಗರ್) ಹತ್ತಿ, ಮೂರನೆಯ ಸರಣಿ ರೇಯಾನ್ ಬೂಕ್ಲೇ.

ii. ಜೋಡಿ ಸಾದಾ ನೇಯ್ಗೆಯೊಡನೆ ಹೊಕ್ಕು ಅಥವಾ ಹಾಸಿನ ಚಿತ್ರ ಸಂಯೊಜನೆ : ಜೋಡಿ ಸಾದಾ ನೇಯ್ಗೆ ಶೈಲಿಯಲ್ಲಿ ಹೊಕ್ಕು ಅಥವಾ ಹಾಸಿನ ದಾರವನ್ನು ಹಾಯಿಸುವುದರ ಮೂಲಕ ವಸ್ತ್ರವನ್ನು ಮತ್ತಷ್ಟೂ ಚಿತ್ರವತ್ತಾಗಿ ಮಾಡಬಹುದು. ಇಲ್ಲಿ ಸಮೃದ್ಧ ಟ್ಯಾಪೆಸ್ಟ್ರಿ ರಚನೆಯನ್ನು ಕಾಣಬಹುದು. ಇದರಲ್ಲಿ ಹೊಕ್ಕಿನ ಎರಡು ಸರಣಿಗಳನ್ನು ವಸ್ತ್ರದ ಮೇಲ್ಮೈಯಲ್ಲಿ ಹಾಯಿಸಲಾಗಿರುತ್ತದೆ. ಹೊಕ್ಕಿನ ಸರಣಿಗಳನ್ನು ಅಳವಡಿಸಿರುವ ಕ್ರಮ ಹೀಗೆದೆ : ಕಡು ಹಸಿರು 1 ಎಳೆ (ಪಿಕ್), ಹಳದಿ ರೇಷ್ಮೆ 1 ಎಳೆ (ಪಿಕ್). ಹಾಸಿನ ಸರಣಿಗಳನ್ನು ಅಳವಡಿಸಿರುವ ಕ್ರಮ : ಕಂದು ಹತ್ತಿ 1 ಎಳೆ (ಎಂಡ್), ಬಿಳಿ ಹತ್ತಿ 1 ಎಳೆ (ಎಂಡ್). ವಸ್ತ್ರವನ್ನು ಪರಿಪೂರ್ಣವಾಗಿ ಪ್ರತಿಲೋಮಗೊಳಿಸುವುದು ಈ ವಿನ್ಯಾಸದ ವೈಶಿಷ್ಟ್ಯ. ವಸ್ತ್ರದ ಮುಂಭಾಗದಲ್ಲಿ ಜೋಡಿ ಸಾದಾ ನೇಯ್ಗೆ ಅಥವಾ ಹೊಕ್ಕನ್ನು ಹಾಯಿಸುವುದರಿಂದ ಗಾಢವಾದ ಪರಿಣಾಮ ಇದ್ದು ಹಿಂಭಾಗದಲ್ಲಿ ಅದಕ್ಕೆ ಅನುಗುಣವಾದ ಲಘು ಪರಿಣಾಮ ಇರುತ್ತದೆ.

iii. ಹೊಕ್ಕಿನ ಮೇಲ್ಮೈ ಟ್ಯಾಪೆಸ್ಟ್ರಿ ವಸ್ತ್ರಗಳು : ಟ್ಯಾಪೆಸ್ಟ್ರಿ ವಿನ್ಯಾಸದ ಹೊಕ್ಕಿನ ನಾನಾ ವಿಧ ವರ್ಣಗಳನ್ನು ಪ್ರಮುಖವಾಗಿ ಇಲ್ಲಿ ಬಳಸಲಾಗಿದೆ. ಈ ವಿನ್ಯಾಸದ ವೈವಿಧ್ಯಗಳ ಒಂದು ಬಗೆಯನ್ನು ಚಿತ್ರದಲ್ಲಿ ನೋಡಬಹುದು ಎರಡು ಬಂಧಕ ಎಳೆಗಳು ಮತ್ತು ಆಲಂಕಾರಿಕ ಎಳೆಗಳ-ಈ ಅನುಕ್ರಮದಲ್ಲಿ ಎರಡು ಸರಣಿ ಹತ್ತಿಯ ಹಾಸನ್ನು ಅಳವಡಿಸಲಾಗಿದೆ. ಭಿನ್ನ ವರ್ಣಗಳ ನಾಲ್ಕು ಸರಣಿ ಉಣ್ಣೆ (ವುಸ್ರ್ಟೆಡ್) ಹೊಕ್ಕನ್ನು ಈ ಬಗೆಯಲ್ಲಿ ಬಳಸುತ್ತಾರೆ ಆದರೆ ವಸ್ತ್ರದ ಮೇಲ್ಮೈಯ ಪ್ರತಿ ಅಡ್ಡರೇಖೆಗೂ ಬೇಕಾದ ಬಣ್ಣಗಳ ಸಂಖ್ಯೆಗೆ ಅನುಗುಣವಾಗಿ ಹೊಕ್ಕಿನ ಸರಣಿಗಳ ಸಂಖ್ಯೆಯನ್ನು ಅಧಿಕಗೊಳಿಸಬಹುದು. ಮೇಲ್ಮೈಯ ಪ್ರತಿ ಪಿಕ್‍ಗೆ ಪ್ರತಿಯೊಂದು ಹೊಕ್ಕಿನ ಗುಂಪು ತಕ್ಕುದಾಗಿರುತ್ತದೆ. ಚಿತ್ರರೂಪಿತವಾಗುವಡೆಯಲ್ಲಿ ಆಲಂಕಾರಿಕ ಹಾಸಿನ ಎಳೆಗಳ (ಎಂಡ್) ಮೇಲೆ ಹೊಕ್ಕಿನ ಪ್ರತಿಯೊಂದು ಬಣ್ಣವೂ ಹಾದುಹೋಗುತ್ತದೆ. ನಕ್ಷೆಯ ಅನುಕ್ರಮ ಅಡ್ಡ ಭಾಗಗಳ ಮೇಲೆ ಒಂದಾದ ಮೇಲೆ ಮತ್ತೊಂದು ಹೊಕ್ಕು ಬದಲಾಗಿ ಬರುತ್ತದೆ. ಹೊಕ್ಕುಗಳನ್ನು ವಸ್ತ್ರದ ಮುಂಭಾಗ ಹಾಗೂ ಹಿಂಭಾಗದಲ್ಲಿ ಬಂಧಕ ಎಳೆಗಳಿಂದ ಹೊಲಿದಿರಲಾಗಿರುತ್ತದೆ. ವಸ್ತ್ರದ ಮೇಲ್ಮೈಯಲ್ಲಿ ಪ್ರತಿಯೊಂದು ಹೊಕ್ಕನ್ನೂ ಉದ್ದರೇಖೆಗಳಲ್ಲಿ ಹೊಲಿದಿರಲಾಗಿರುತ್ತದೆ ; ಹೀಗಾಗಿ ಇದರ ಮೇಲ್ಮೈ ಹೊಕ್ಕಿನ ಉಬ್ಬು ರಚನೆಯಂತೆ ಕಾಣುತ್ತದೆ.

iv. ವಿಶೇಷವಾಗಿ ಹೊಲಿದ ಹೊಕ್ಕಿನ ಟ್ಯಾಪೆಸ್ಟ್ರಿ ವಸ್ತ್ರಗಳು : ಇವು ಚಿತ್ರವತ್ತಾದ ಹೊಕ್ಕಿನ ಟ್ಯಾಪೆಸ್ಟ್ರಿಯ ಒಂದು ವರ್ಗ. ಇವಕ್ಕೂ ಹೊಕ್ಕಿನ ಮೇಲೆ ಟ್ಯಾಪೆಸ್ಟ್ರಿ ವಸ್ತ್ರಗಳಿಗೂ ಸಾಮ್ಯ ಇದೆ. ಆದರೆ ಇಲ್ಲಿ ಹೊಕ್ಕಿನ ಉಬ್ಬುಗೆರೆಗಳು ನಾಜೂಕಾಗಿರುತ್ತವೆ. ಆದ್ದರಿಂದ ಇಂಥ ವಸ್ತ್ರಗಳನ್ನು ಪೀಠೋಪಕರಣಗಳ ಅಲಂಕರಣಕ್ಕಾಗಿ ಬಳಸುವುದಿದೆ. ಹಾಸನ್ನು ಅಳವಡಿಸುವ ಕ್ರಮ ಹೀಗಿದೆ : ಕಪ್ಪು ಹತ್ತಿಯ ಮುಂಭಾಗ ಹೊಲಿಗೆಯ ಎಳೆ (ಎಂಡ್) 1, ಕಪ್ಪು ಹತ್ತಿಯ ಆಲಂಕಾರಿಕ ಎಳೆ (ಎಂಡ್) 1; ಕಂದು ಹತ್ತಿಯ ಹಿಂಭಾಗ ಹೊಲಿಗೆಯ ಎಳೆ (ಎಂಡ್) 1, ಕಪ್ಪು ಹತ್ತಿಯ ಆಲಂಕಾರಿಕ ಎಳೆ (ಎಂಡ್) 1; ಹಾಸು ನೂಲುಗಳು ಇಮ್ಮಡಿಯಾಗಿರುತ್ತವೆ. ಹತ್ತಿಯ ಮೂರು ಆಲಂಕಾರಿಕ ಎಳೆಗಳನ್ನು (ಪಿಕ್) ಹೊಕ್ಕು ಹೊಂದಿರುತ್ತವೆ. ಈ ವಸ್ತ್ರದಲ್ಲಿ ಬಂಧಕ ಹಾಸು ಬಳಕೆಯಾಗಿರುವುದರಿಂದ ಹೊಲಿಗೆಯ ಹಾಸುಗಳಲ್ಲಿ ಒಂದು ತೇಲಾಡುವ ಹೊಕ್ಕು ಮೇಲ್ಮೈಯಲ್ಲಿ ದೃಢವಾಗಿ ಬಂಧಿತವಾಗಿರುತ್ತದೆ. ಮತ್ತೊಂದು ಹೊಕ್ಕು ಮುಂಭಾಗದಲ್ಲಿ ಅಗತ್ಯವಿರದ ಇನ್ನಿತರ ಹೊಕ್ಕುಗಳನ್ನು ವಸ್ತ್ರದ ಹಿಂಭಾಗದಲ್ಲಿ ಸಡಿಲವಾಗಿರುವಂತೆ ಮಾಡುತ್ತದೆ.

v. ಹಾಸಿನ ಮೇಲ್ಮೈ ಟ್ಯಾಪೆಸ್ಟ್ರಿ ವಸ್ತ್ರಗಳು : ಇವು ಸಹ ಟ್ಯಾಪೆಸ್ಟ್ರಿ ವಸ್ತ್ರಗಳ ಒಂದು ವಿಶಿಷ್ಟ ವರ್ಗ. ಇವುಗಳ ವಿನ್ಯಾಸ ಬಣ್ಣಗಳ ಮೇಲೆ ಅವಲಂಬಿತವಾಗಿರುತ್ತದೆ. ಇಂಥ ವಸ್ತ್ರಗಳ ಮೇಲ್ಮೈ ಹಾಸಿನ ಉಬ್ಬುಗಳಿಂದ ಕೂಡಿರುತ್ತವೆ. ಇಲ್ಲಿ ಎರಡು, ಮೂರು ಅಥವಾ ಹೆಚ್ಚು ಸರಣಿಗಳ ಆಲಂಕಾರಿಕ ಹಾಸುಗಳನ್ನು ಭಿನ್ನವರ್ಣಗಳಲ್ಲಿ ಪ್ರಮುಖವಾಗಿ ಬಳಸುವುದರಿಂದ ಬೇರೆ ಬೇರೆ ನಮೂನೆಗಳು ರೂಪಿತವಾಗುತ್ತವೆ. ಒಂದು ಅತಿ ಗಾಢವಾದ ಮತ್ತೊಂದು ಅತಿ ಲಘುವಾದ, ಪರಸ್ಪರ ವೈದೃಶ್ಯಗಳಲ್ಲಿರುವ ಎರಡು ಆಲಂಕಾರಿಕ ಹೊಕ್ಕುಗಳನ್ನು ಇಲ್ಲಿ ಬಳಸುವುದಿದೆ. ಇವೆರಡೂ ಆಯಾ ಬಣ್ಣದ ಆಲಂಕಾರಿಕ ಹಾಸಿನ ಸಂಯೋಗದಿಂದ ವಸ್ತ್ರದ ಮೇಲ್ಮೈಯಲ್ಲಿ ಪರಣಾಮವನ್ನು ಉಂಟುಮಾಡುತ್ತವೆ. ಇದರಿಂದ ಶೃಂಗಾರದ ರಮಣೀಯತೆಯುಳ್ಳ ಚಿಕ್ಕಭಾಗಗಳು ಎದ್ದುಕಾಣುತ್ತವೆ. ಆಲಂಕಾರಿಕ ಹಾಸನ್ನು ಮೂರು ಬಣ್ಣಗಳಲ್ಲಿ ಉಪಯೋಗಿಸಿ ಎಂಟು ಬಗೆಯ ಪರಿಣಾಮಗಳನ್ನು ವಸ್ತ್ರದ ಯಾವ ಭಾಗದಲ್ಲಿ ಬೇಕಾದರೂ ತರಬಹುದು. ಇದನ್ನು ಮಾಡುವ ಕ್ರಮ ಹೀಗಿದೆ : ಹೊಕ್ಕಿನ ಎರಡು ಬಣ್ಣಗಳೊಡನೆ ಹಾಸಿನ ಮೂರು ಬಣ್ಣಗಳನ್ನು ಮಿಶ್ರಮಾಡಿ ಆರು ಪರಿಣಾಮಗಳನ್ನೂ ಹೊಕ್ಕಿನ ಎರಡು ಬಣ್ಣಗಳಿಂದ ಎರಡು ಪರಿಣಾಮಗಳನ್ನು ಪ್ರತ್ಯೇಕವಾಗಿ ತರಬಹುದು. ಹಾಸಿನ ಬಣ್ಣಗಳನ್ನು ಸೂಕ್ತವಾಗಿ ಪ್ರತಿಸ್ಟಾಪಿಸುವುದರಿಂದ ವಸ್ತ್ರದ ಅಗಲಕ್ಕೂ ವಿಪುಲ ವರ್ಣವೈವಿಧ್ಯದ ಆಲಂಕಾರವನ್ನು ತರಬಹುದು. ಆಲಂಕಾರಿಕ ಹಾಸು ಮತು ಹುಕ್ಕಿನ ಎಳೆಗಳ (ಎಂಡ್ ಮತ್ತು ಪಿಕ್) ಜೊತೆಗೆ ನವುರಾದ ಕಪ್ಪು ಬಣ್ಣದ ಬಂಧಕ ದಾರಗಳನ್ನು ಹಾಸು ಮತ್ತು ಹೊಕ್ಕುಗಳಾಗಿ ಬಳಸುತ್ತಾರೆ. ಈ ವಸ್ತ್ರದ ರಚನೆಯಲ್ಲಿ ಆಲಂಕಾರಿಕ ಹಾಗೂ ಬಂಧಕ ದಾರಗಳಿಗೆ ಇಮ್ಮಡಿ ಹತ್ತಿನೂಲುಗಳನ್ನು ಬಳಸಿ, ಇದನ್ನು ಎರಡೂ ಕಡೆಗಳಲ್ಲಿ ಉಪಯೋಗಿಸುತ್ತಾರೆ.
vii. ಸೂಜಿ ಮೊನೆ ಟ್ಯಾಪೆಸ್ಟ್ರಿ : ಇದು ಕುರ್ಚಿ ಮುಂತಾದ ಪೀಠೋಪಕರಣಗಳ ಆಲಂಕರಣಕ್ಕಾಗಿ ಬಳಸುವ ಮತ್ತೊಂದು ಬಗೆಯ ಟ್ಯಾಪೆಸ್ಟ್ರಿ. ಇದರಲ್ಲಿ ಕೈಕಸೂತಿ ಮಾಡಲಾಗುತ್ತದೆ. ಮಡಿಚಿದ ಹತ್ತಿನೂಲುಗಳಿಂದ ರಚನೆಯಾದ ಲೀನೋ ಅಥವಾ ಸಾದಾ ನೇಯ್ಗೆಯಿಂದ ತಯಾರಾದ ಹಾಗೂ ತೀವ್ರಸಂಸ್ಕರಣಕ್ಕೆ ಒಳಪಡಿಸಿದ ವಸ್ತ್ರವನ್ನು ಆಧಾರತಲವಾಗಿ ಬಳಸುತ್ತಾರೆ. ಈ ತಲದ ಮೇಲೆ ನಕ್ಷೆಯನ್ನು ಮೊದಲೇ ಮುದ್ರಿಸಿರುತ್ತಾರೆ. ಬೇರೆ ಬೇರೆ ಬಣ್ಣದ ನೂಲುಗಳನ್ನು ಬಳಸಿಕೊಂಡು ಸೂಕ್ಷ್ಮವಾದ ಕೈಕಸೂತಿ ಕೆಲಸದಿಂದ ಅದನ್ನು ಹೊಲಿಯುತ್ತಾರೆ.

ಮೇಲೆ ಹೇಳಿದ ಟ್ಯಾಪೆಸ್ಟ್ರಿ ವಸ್ತ್ರದ ಬಗೆಗಳ ಜೊತೆಗೆ ಇನ್ನೂ ಎರಡು ವಿಶಿಷ್ಟ ವರ್ಗಗಳಾದ ಗುಂಜು ಟ್ಯಾಪೆಸ್ಟ್ರಿಗಳಿವೆ. ಜಮಖಾನೆಗಳೀಗಾಗಿಯೇ ಬಳಸಲಾಗುವ ಇವನ್ನು ಟ್ಯಾಪೆಸ್ಟ್ರಿ ಜಮಖಾನೆ ಮಗ್ಗಗಳಲ್ಲಿ ತಯಾರಿಸುತ್ತಾರೆ 1 ಟ್ಯಾಪೆಸ್ಟ್ರಿ ಜಮಖಾನೆ : ಇದು ಕುಣಿಕೆ ಗುಂಜು ಜಮಖಾನೆ. ಗುಂಜುಹಾಸನ್ನು ಹರಿತವಲ್ಲದ ತಂತಿಗಳ ಸಹಾಯದಿಂದ ನೇಯುತ್ತಾರೆ. ಜಮಖಾನೆಗೆ ಬೇಕಾದ ನಕ್ಷೆ ಹಾಗೂ ಬಣ್ಣಗಳಿಗೆ ಅನುಗುಣವಾಗಿ ಗುಂಜು ಹಾಸಿದ ದಾರಗಳ ಮೇಲೆ ಚಿತ್ರಗಳನ್ನು ಅಚ್ಚೊತ್ತುತ್ತಾರೆ. 2 ಟ್ಯಾಪೆಸ್ಟ್ರಿ ಮಖಮಲು ಜಮಖಾನೆ : ಇದು ಕತ್ತರಿಸಿದ ಗುಂಜು ಜಮಖಾನೆ. ಇದನ್ನು ಅಚ್ಚೊತ್ತಿದ ಗುಂಜು, ಹಾಸಿನ ಅಥವಾ ಒಂದೇ ಚೌಕಟ್ಟು ನೂಲಿನಿಂದ ತಯಾರಿಸುತ್ತಾರೆ. ಸಾಂಪ್ರದಾಯಿಕವಾಗಿ ಇದನ್ನು ಹರಿತವಾದ ತಂತಿಗಳ ಸಹಾಯದಿಂದ ನೇಯುವುದರಿಂದ ಗುಂಜು ಕುಣಿಕೆಗಳನ್ನು ಕತ್ತರಿಸಿಬಿಡುತ್ತಾರೆ. ಈ ರೀತಿಯ ಮಖಮಲು ಜಮಖಾನೆಗಳು ಈಗ ಜೋಡಿ ಅಥವಾ ಎದರುಬದುರು ನೇಯ್ಗೆ ಮಗ್ಗದಲ್ಲಿಯೂ ತಯಾರಾಗುತ್ತವೆ. ಈ ರೀತಿ ನೇಯ್ಗೆ ಜಮಖಾನೆಗಳನ್ನು ವಿಭಾಗಮಾಡಿ ಎರಡು ಪ್ರತ್ಯೇಕ ಜಮಖಾನೆಗಳನ್ನು ರೂಪಿಸುತ್ತಾರೆ.
(ಡಿ.ವಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ